ಹಾಲ್ಡನ್ ಕೆಫ಼ರ್ ಹಾರ್ಟ್‌ಲೈನ್ (1903-83) ದೇಹವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಗೈದ ಅಮೆರಿಕನ್ ಪ್ರಜೆ. ನರಕೋಶಗಳ ಉಪಾಪಚಯ ಶೋಧನೆ ಈತನ ಪ್ರಧಾನಾಸಕ್ತಿ. ಈ ಕ್ಷೇತ್ರದಲ್ಲಿ ಮುಂದುವರಿದಂತೆ ಅಕ್ಷಿಪಟದ (ರೆಟಿನಾ) ಬಿಡಿಕೋಶಗಳ ಕ್ರಿಯಾತಂತ್ರ ಕುರಿತು ಲಕ್ಷ್ಯ ಸಾಂದ್ರೀಕರಿಸಿದ. ಇದಕ್ಕಾಗಿ ಈತ ಬಲು ಪುಟ್ಟ ಎಲೆಕ್ಟ್ರೋಡುಗಳನ್ನು ಬಳಸಿ ಹಾರ್ಸ್‌ಶೂ ಏಡಿ ಮತ್ತು ಕಪ್ಪೆಗಳ ಕಣ್ಣುಗಳಲ್ಲಿಯ ಬಿಡಿ ತಂತುಗಳನ್ನು ಬೇರ್ಪಡಿಸಿ ಅಭ್ಯಸಿಸಿದ. ಹೀಗೆ ದೃಷ್ಟಿಸಂವೇದದ (ಸೆನ್ಸ್ ಆಫ್ ಸೈಟ್) ಸೂಕ್ಷ್ಮ ಕ್ರಿಯೆಗಳ ಬಗ್ಗೆ ಮಾನವನ ಅರಿವು ವಿಸ್ತಾರವಾಯಿತು. ಈ ಸಾಧನೆಗಾಗಿ ಈತನಿಗೆ 1967ರ ವೈದ್ಯವಿಭಾಗದ ನೊಬೆಲ್ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. == ಉಲ್ಲೇಖಗಳು ==